ನೌಕಾಯಾನ-
	ಒಂದು ನೆಲೆಯಿಂದ ಇನ್ನೊಂದು ನೆಲೆಗೆ ನೌಕೆಯ ಚಲನೆಯನ್ನು ನಿರ್ದೇಶಿಸುವ ತಂತ್ರಗಳ ಅಧ್ಯಯನ (ನ್ಯಾವಿಗೇಶನ್). ನೌಕಾಗತಿವಿಜ್ಞಾನ ಪರ್ಯಾಯಪದ, ನೆಲೆ, ದಿಶೆ, ದೂರ ಇವು ನೌಕಾಯನದ ಮೂರು ಮುಖ್ಯ ಘಟಕಗಳು. ನೌಕೆ ಈಗ ಇರುವ ನೆಲೆ ಯಾವುದು, ಅದು ತಲಪಬೇಕಾದ ನೆಲೆಯ ದಿಶೆ ದೂರ ಏನು ಎಂಬವನ್ನು ಅರಿತು ತದನುಗುಣವಾಗಿ ಚಲನೆಯನ್ನು ರೂಪಿಸುವುದೇ ನೌಕಾಯಾನದ ಉದ್ದೇಶ. ಇಂದು ನೌಕಾಯಾನ ಪದವನ್ನು (ಅಂತೆಯೆ ನೌಕಾಯನ ವಿಜ್ಞಾನವನ್ನು) ಜಲ, ವಾಯು ಹಾಗೂ ಆಕಾಶಯಾನಗಳನ್ನು ಕುರಿತಂತೆ ಬಳಸುವುದುವಾಡಿಕೆ. ನೆಲದ ಮೇಲೆ ಗಡಿ ಗುರುತುಗಳು ಸ್ಥಿರವಾಗಿರುವುದರಿಂದ, ಹಾದಿಗಳು ನಿರ್ಣೀತವಾಗಿರುವುದರಿಂದ, ಭೂಪಟಗಳು ಶಿಷ್ಟೀಕೃತವಾಗಿರುವುದರಿಂದ ಮೇಲಾಗಿ ನೆಲದ ಮೇಲಿನ ಪ್ರಯಾಣ ಇತರ ಮೂರು ವಲಯಗಳಲ್ಲಿಯ ಪ್ರಯಾಣಗಳಿಗಿಂತ, ಸಾಪೇಕ್ಷವಾಗಿ, ಅಪಾಯರಹಿತವಾದ್ದರಿಂದ ಇಲ್ಲಿಯ ನೌಕಾಯನ ತಂತ್ರಗಳು ಸರಳವಾಗಿವೆ. ಆದರೆ ಒಂದು ಕಾಲದಲ್ಲಿ, ವಿಜ್ಞಾನ ಸಾಕಷ್ಟು ಮುಂದುವರಿಯದಿದ್ದ ಹಿಂದಿನ ದಿನಗಳಲ್ಲಿ, ನೆಲದ ಮೇಲಿನ ಸಂಚಾರ ಕೂಡ ಸಾಕಷ್ಟು ನವತಂತ್ರಗಳನ್ನು ಬೇಡುತ್ತಿತ್ತು; ಸವಾಲನ್ನೂ ಒಡ್ಡುತ್ತಿತ್ತು. ಇದು ಹಾಗಿರಲಿ.

	ಜಲ, ವಾಯು ಮತ್ತು ಆಕಾಶ ಈ ತ್ರಿವಲಯಗಳಲ್ಲಿ ಸಂಚರಿಸುವವರು ಅತಿ ವಿಸ್ತಾರ ಹಾಗೂ ಅಜ್ಞಾತ ಪ್ರದೇಶಗಳಲ್ಲಿ ಸುದೀರ್ಘಕಾಲ ಪಯಣಿಸಿ ಸುರಕ್ಷಿತವಾಗಿ ಸಕಾಲದಲ್ಲಿ ಗುರಿ ಸೇರಬೇಕಾಗುತ್ತದೆ. ಇಂಧನವನ್ನು ಮಿತವಾಗಿ ಬಳಸಿ ಅದು ಪೋಲಾಗದಂತೆ ನೋಡಿಕೊಳ್ಳುವುದು ಅತಿ ಜರೂರಿನ ಆವಶ್ಯಕತೆ. ಎಂದೇ ನೌಕಾಯನದಲ್ಲಿ ನಾಲ್ಕು ಮುಖ್ಯ ಆವಶ್ಯಕತೆಗಳನ್ನು ಗುರುತಿಸಲಾಗಿದೆ: (i) ಹಾದಿಯನ್ನು ಹುಡುಕುವುದು, (ii) ಡಿಕ್ಕಿಯನ್ನು ತಪ್ಪಿಸುವುದು, (iii) ಇಂಧನ ಮಿತವ್ಯಯ, (iv) ಕಾಲಪಾಲನೆ.

	ಈ ಮೇಲೆ ಹೇಳಿದ ತ್ರಿವಲಯಗಳಲ್ಲಿ ವಾಹನಸಂಚಾರವನ್ನು ನಿಯಂತ್ರಿಸಲು ಕ್ಲುಪ್ತ ಮಾರ್ಗಗಳು ಇರುವುದಿಲ್ಲ. ಹೀಗಾಗಿ ಸರಿಯಾದ ಹಾದಿ ಹುಡುಕುವುದು ಒಂದು ಸಾಹಸವೇ ಆಗುವುದು. ಅಲ್ಲಿ ಸಂಚಾರಕ್ಕೆ ದೊರೆಯುವ ಪ್ರದೇಶ ಅತಿ ವಿಶಾಲವಾಗಿರುವುದರಿಂದ ಮೇರೆ ತಪ್ಪಿ ಸಾಗುವ ವಾಹನಗಳು ಡಿಕ್ಕಿಯಾಗಿ ಭೀಕರ ಅಪಘಾತಗಳು ಸಂಭವಿಸುವುದು ಅಪರೂಪವೇನಲ್ಲ.  ಆಗ ಈಗ ವರದಿ ಆಗುವ ಹಡಗುಗಳ ಡಿಕ್ಕಿ, ವಿಮಾನಗಳ ಡಿಕ್ಕಿ ಉದಾಹರಣೆಗಳು. ಹಡಗು, ವಿಮಾನ ಮತ್ತು ಆಕಾಶನೌಕೆಗಳ ಚಾಲನೆಗೆ ಅತ್ಯಧಿಕ ಇಂಧನ ಬೇಕಾಗುತ್ತದೆ. ಇಂಧನ ವಿನಿಯೋಗದ ಮೇಲೆ ಹತೋಟಿ ಇಡುವುದು ಅವಶ್ಯ. ಇಲ್ಲವಾದರೆ ಪ್ರಯಾಣ ಬಲು ದುಬಾರಿಯಾದೀತು. ಕಾಲಪಾಲನೆಯೂ ಅಷ್ಟೆ. ಪ್ರಯಾಣ ವೇಗ ಏರಿದಂತೆ ಜೀವನ ಸಂಕೀರ್ಣವಾಗುವುದು. ಇಂಥಲ್ಲಿ ಪ್ರತಿಯೊಂದು ವಾಹನವೂ ಕಾಲಪಾಲನೆಯ ಬಗ್ಗೆ ಕರಾರುವಾಕ್ಕಾಗಿ ಇರದಿದ್ದರೆ ಪರಿಸ್ಥಿತಿ ಗಲಿಬಿಲಿಯದಾಗುತ್ತದೆ.

	ಹಿಂದಿನ ಕಾಲದಲ್ಲಿ ನೌಕೆಯನ್ನು ಅದರ ಹಾದಿಯಲ್ಲಿ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ಕಲೆಯನ್ನು ನೌಕಾಯನ ಎಂದು ಹೇಳುವುದಿತ್ತು. ಇಂದು ಈ ವ್ಯಾಖ್ಯೆಯನ್ನು ಬದಲಾಯಿಸಿ ನೌಕಾಯನವೆಂದರೆ ನೌಕೆಯನ್ನು ಅಥವಾ ಜೀವಿಯನ್ನು ಅದರ ಹಾದಿಯಲ್ಲಿ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ವಿಜ್ಞಾನ ಎಂದು ಮಾರ್ಪಡಿಸುವುದು ಸಮರ್ಪಕವಾಗಿದೆ.

	ನೌಕಾಯನದ ಮೂರು ಘಟ್ಟಗಳು: ಉದ್ದೇಶರಹಿತವಾಗಿ ತೇಲುವುದಾಗಲಿ ಹಾರುವುದಾಗಲಿ ನೌಕಾಯನ ಎನ್ನಿಸದು. ನೌಕಾಯನದ ಪ್ರಥಮ ಆವಶ್ಯಕತೆ ಎಂದರೆ ಎಲ್ಲಿಗೆ ತೆರಳಬೇಕು ಎನ್ನುವ ಲಕ್ಷ್ಯದ ಅರಿವು. ಇದನ್ನು ನಿರ್ಧರಿಸಿದ ಬಳಿಕ ನೌಕೆ-ಅದು ಜಲನೌಕೆ ಆಗಬಹುದು ಅಥವಾ ವಾಯುನೌಕೆ ಆಗಬಹುದು-ಯಾವ ಹಾದಿಯನ್ನು ಅನುಸರಿಸಬೇಕು ಎಂಬುದನ್ನು ತೀರ್ಮಾನಿಸಬೇಕಾಗುವುದು. ಇದು ನೌಕಾಯನದ ಪ್ರಥಮ ಘಟ್ಟ. ನೌಕೆ ಪೂರ್ವನಿರ್ಧರಿತ ಹಾದಿ ಮೇಲೆ ಸಾಗಲು ಅದರ ಚಲನದಿಶೆ ಹಾಗೂ ಚಲನ ವೇಗ ಎರಡೂ ಸರಿಯಾಗಿ ಹೊಂದಾಣಿಕೆ ಆಗುವುದು ಅವಶ್ಯ. ಇದು ನೌಕಾಯನದ ದ್ವಿತೀಯ ಘಟ್ಟ. ಆರಂಭದಲ್ಲಿ ವೇಗ ಅಧಿಕವಾಗಿರಬೇಕು. ನಡು ಹಾದಿಯಲ್ಲಿ ಅದನ್ನು ಏರಿಸಬೇಕಾದೀತು, ಇಳಿಸಬೇಕಾದೀತು. ಚಲನದಿಶೆಯನ್ನು ಯುಕ್ತವಾಗಿ ಮಾರ್ಪಡಿಸಬೇಕಾದೀತು ಮತ್ತು ಕೊನೆಯಲ್ಲಿ ವೇಗವನ್ನು ತಗ್ಗಿಸಿ ಗುರಿಯಲ್ಲಿ ಮೆತ್ತಗೆ ಇಳಿಯುವುದು ಸಾಧ್ಯವಾಗಬೇಕು. ಆದ್ದರಿಂದ ವೇಗೋತ್ಕರ್ಷವನ್ನು ಒಳಗೊಂಡಂತೆ ನೌಕೆಯ ಚಾಲನ ನೌಕಾಯನದ ತೃತೀಯ ಘಟ್ಟ.

	ಆಧುನಿಕ ನೌಕಾಯನ ತಂತ್ರಗಳು : ಇವನ್ನು ಮುಖ್ಯವಾಗಿ ಚಾಲನ, ಮಾರ್ಗಧಾರಣ, ಸ್ಥಾನ ನಿರ್ಧಾರ ಮತ್ತು ರೇಡಾರ್ ಬಳಕೆ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಅಭ್ಯಸಿಸುವುದು ವಾಡಿಕೆ.

	ಚಾಲನ : ಚಾಲನೆಯಲ್ಲಿ ನೌಕೆಯ ಕರ್ಣನ (ಸ್ಟಿಯರಿಂಗ್) ಮತ್ತು ಸ್ಥಿರೀಕರಣ (ಸ್ಟೆಬಿಲೈಸೇಶನ್) ಮುಖ್ಯವಾಗಿವೆ. ನೀರಿನ ಹೊಯ್ಲಿನಲ್ಲಿ ಅಥವಾ ಗಾಳಿಯ ಸುರುಳಿ ಚಲನೆಯಲ್ಲಿ ನೌಕೆಯನ್ನು ಕರ್ಣಿಸಲು ಸಾರಥಿ ಕೇವಲ ತನ್ನ ಇಂದ್ರಿಯಲಭ್ಯ ಮಾಹಿತಿಗಳನ್ನು ಅವಲಂಬಿಸುವುದು ಅಪಾಯಕಾರಿ, ಇಂದಿನ ವೇಗಯುತ ಯಾನಗಳಲ್ಲಿ ಸಾಧ್ಯವೂ ಅಲ್ಲದ ಸಂಗತಿ. ಯಾನದ ವೇಳೆ ಅವನಿಗೆ ಆಗಿಂದಾಗ್ಗೆ ಯುಕ್ತ ಮಾಹಿತಿಗಳನ್ನು ಒದಗಿಸಲು ವಿಶೇಷ ಉಪಕರಣಗಳು ನೌಕೆಯಲ್ಲಿ ಇರುವುವು. ಇನ್ನೂ ಜಟಿಲ ಚಲನೆಗಳಲ್ಲಿ, ಉದಾಹರಣೆಗೆ ಪರಾಸ್ವನಿಕ ವೇಗಗಳಿಂದ ಚಲಿಸುವ ವಿಮಾನಗಳಲ್ಲಿ ಹಾಗೂ ಆಕಾಶಯಾನಗಳಲ್ಲಿ, ಗಣಕಗಳ ನೆರವಿನಿಂದ ಕರ್ಣನವನ್ನು ಸ್ವತಶ್ಚಲಿಯಾಗಿ ನಿರ್ವಹಿಸುವುದು ಅನಿವಾರ್ಯವಾಗಿದೆ.

	ಸ್ಥಿರಕಾರಿಗಳೆಂಬ (ಸ್ಟೆಬಿಲೈಸರ್ಸ್) ವಿಶೇಷ ಸಾಧನಗಳನ್ನು ಜಲನೌಕೆಗಳಿಗೂ ವಾಯುನೌಕೆಗಳಿಗೂ ಲಗತ್ತಿಸಲಾಗುವುದು. ಇವುಗಳ ನೆರವಿನಿಂದ ಆ ನೌಕೆಗಳು ಚಲನೆಯಲ್ಲಿರುವಾಗ ಮತ್ತು ತಿರುಗಾಸುಗಳನ್ನೂ ಏರಿಳಿತಗಳನ್ನೂ ನಿಭಾಯಿಸುತ್ತಿರುವಾಗ ಸ್ಥಿರೀಕರಣವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ.

	ಮಾರ್ಗಧಾರಣ : ಸರಿಯಾದ ಗುರಿಯನ್ನು ಸಕಾಲದಲ್ಲಿ ತಲಪುವುದೊಂದೇ ಮಾರ್ಗಧಾರಣದ ಉದ್ದೇಶ ಅಲ್ಲ; ನಡು ಹಾದಿಯಲ್ಲಿ ನೌಕೆಗಳ ಸಂಘಟನೆಯನ್ನು ತಪ್ಪಿಸುವುದು ಕೂಡ ಇದರಲ್ಲಿ ಸೇರಿದೆ. ವಿಸ್ತಾರ ಜಲರಾಶಿಯ ಮೇಲಾಗಲಿ ಅದಕ್ಕಿಂತ ವ್ಯಾಪಕವಾಗಿ ಮೂರು ಆಯಾಮಗಳಲ್ಲಿಯೂ ಹರಡಿ ಹೋಗಿರುವ ವಾಯುಮಂಡಲದಲ್ಲಿ (ಇಲ್ಲವೇ ಆಕಾಶದಲ್ಲಿ) ಆಗಲಿ ಸಂಘಟನೆ ಸಂಭವಿಸುವುದು ಸಾಧ್ಯವೇ ಎಂಬ ಸಂದೇಹ ಮೂಡಬಹುದು. ಈ ತನಕ ಆಗಿ ಹೋಗಿರುವ ಹಡಗು-ಹಡಗು ಯಾ ವಿಮಾನ-ವಿಮಾನ ಸಂಘಟನೆಗಳು, ಇವು ನಾವು ಊಹಿಸಿದಷ್ಟು ಅಪೂರ್ವ ಘಟನೆಗಳೇನೂ ಅಲ್ಲ ಎಂಬುದನ್ನು ರುಜುವಾತಿಸಿವೆ. ಆದ್ದರಿಂದ ನಡುಹಾದಿಯ ಡಿಕ್ಕಿಗಳನ್ನು ತಪ್ಪಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

	ಒಂದೇ ರೇಖೆಯ ಮೇಲೆ ಎದುರು ಬದುರಾಗಿ ಎರಡು ನೌಕೆಗಳು ಚಲಿಸುತ್ತಿರುವಾಗ ಸಂಘಟನೆ ಯಾವುದೇ ಕ್ಷಣದಲ್ಲಿ ಸಂಭವಿಸುವುದು ಸಿದ್ಧ. ಇದನ್ನು ತಪ್ಪಿಸಲು ಆಯಾ ನೌಕೆಯ ಸಾರಥಿಗಳು ಪ್ರಯತ್ನಿಸುವುದು ಸುಲಭ ಕಾರ್ಯವೇನೂ ಅಲ್ಲ. ಅತಿ ವೇಗದಿಂದ ಧಾವಿಸುವ ವಿಮಾನಗಳನ್ನು ಕುರಿತಂತೆ ಇದು ಸಾಧ್ಯವೇ ಆಗದು. ಸ್ವಯಂಚಲಿ ಉಪಕರಣಗಳೇ ಮಾಹಿತಿಗಳನ್ನು ಪಡೆದು ಈ ಹೊಣೆಯನ್ನು ನಿರ್ವಹಿಸಬೇಕಾಗುತ್ತದೆ. ವಿಮಾನ ಹಾಗೂ ರಾಕೆಟ್ಟುಗಳ ಹಾರಾಟದ ವೇಳೆ ಭೂನಿಯಂತ್ರಣ ಶಾಖೆ ಸ್ವಯಂಚಲಿ ಉಪಕರಣಗಳ ನೆರವಿನಿಂದ ಯೋಗ್ಯ ಮಾಹಿತಿಗಳನ್ನು ನೌಕೆಗಳಿಗೆ ಪ್ರೇಷಿಸುವುದು.

	ಸಂಘಟ್ಟನೆ ನಿವಾರಣೆ ಸಿದ್ಧಾಂತದ ತತ್ತ್ವವಿಷ್ಟು : ನೌಕೆಗಳ ದೃಷ್ಟಿರೇಖೆ ಬದಲಾಗುತ್ತಿರುವ ದಿಶೆಗೆ ಎದುರು ದಿಶೆಯಲ್ಲಿ ಒಂದರ ಪಥವನ್ನು ತಿರುಗಿಸಿದ್ದಾದರೆ ಆಗ ಅವುಗಳ ಚ್ಯುತಿ ದೂರ (ಮಿಸ್ ಡಿಸ್ಟೆನ್ಸ್) ಏರುತ್ತದೆ ಹಾಗೂ ಸಂಘಟನೆ ನಿವಾರಣೆ ಆಗುತ್ತದೆ. ದೃಷ್ಟಿರೇಖೆ ಬದಲಾಗದೇ ಇರುವಾಗ, ಅಂದರೆ ಒಂದು ನೌಕೆ ಇನ್ನೊಂದರ ನೇರಿದಿರು ಸರಿಯುತ್ತಿರುವಾಗ, ಸಂಘಟ್ಟನೆ ನಿವಾರಣೆ ಸುಲಭವಲ್ಲ. ವಾಯುನೌಕೆಗಳು ಅತಿವೇಗದಿಂದ ಚಲಿಸುವುದರಿಂದ ಅಲ್ಲಿ ಈ ಸಮಸ್ಯೆ ಕೂರಾಗುತ್ತದೆ. ರೇಡಾರ್ ಮತ್ತು ಗಣಕಗಳ ಬಳಕೆಯಿಂದ ಅವುಗಳ ಪಥಗಳನ್ನು ಬೇರ್ಪಡಿಸಿ ಸಂಘಟ್ಟನೆ ಆಗದಂತೆ ಮಾಡುವುದೊಂದೇ ಹಾದಿ.

	ಸ್ಥಾನ ನಿರ್ಧಾರ : ನೌಕೆಯ ಸ್ಥಾನ ನಿರ್ಧಾರ ಮಾಡಲು ನೆಲದ ಮೇಲಿರುವ ಯಾವುದೇ ವೈಲಕ್ಷಣ್ಯಕ್ಕೆ ಸಾಪೇಕ್ಷವಾಗಿ ಭೂಮಿಗೂ ನೌಕೆಗೂ ನಡುವೆ ಕೊಂಡಿ ಏರ್ಪಡಿಸುವುದು ಅವಶ್ಯ. ರೇಡಿಯೊ ಅಲೆಗಳನ್ನು ಬಳಸಿ ಇದನ್ನು ಸಾಧಿಸುವುದು ವಾಡಿಕೆ. ಈ ಅಲೆಗಳನ್ನು ಪ್ರೇಷಿಸಲು ಹಾಗೂ ಅವು ಪ್ರತಿಫಲಿತವಾಗಿ ಬಂದಾಗ ಅವನ್ನು ಅಭಿಗ್ರಹಿಸಿ ಮಾಹಿತಿ ಸಂಗ್ರಹಿಸಲು ತಕ್ಕ ಠಾಣೆಗಳನ್ನು ಸ್ಥಾಪಿಸಲಾಗಿದೆ. ನೌಕೆಗಳ ಎತ್ತರ, ದೂರ, ವೇಗ, ಚಲನ ದಿಶೆ ಮೊದಲಾದ ವಿವರಗಳನ್ನು ಆಯಾ ಕ್ಷಣದಲ್ಲಿ ಇವುಗಳಿಂದ ಪಡೆಯುವುದು ಸಾಧ್ಯವಾಗುವುದು (ನೋಡಿ- ರೇಡಾರ್).

	ಭವಿಷ್ಯದ ನೌಕಾಯನಕಾರ ಹೆಚ್ಚುಹೆಚ್ಚಾಗಿ ವ್ಯವಸ್ಥೆಗಳ ವ್ಯವಸ್ಥಾಪಕನಾಗುವುದು ಸಂಭಾವ್ಯ. ಸಂಚಾರ ಸಾಧನಗಳು ಅಧಿಕ ಸಂಕೀರ್ಣವಾಗಿ ನೌಕಾಯನ ಜಟಿಲ ತಂತ್ರವಿದ್ಯೆಯಾಗಿ ರೂಪುಗೊಳ್ಳುತ್ತಿರುವಂತೆ ಈ ರೀತಿಯ ಪರಿವರ್ತನೆ ಅನಿರೀಕ್ಷಿತವೇನೂ ಅಲ್ಲ.

	ಗ್ರಹಗಳ ನಡುವೆ ನೌಕಾಯನ : ಚಂದ್ರನವರೆಗೆ ಸ್ವತಃ ಮನುಷ್ಯ ಹೋಗಿ ಧರೆಗೆ ಸುರಕ್ಷಿತವಾಗಿ ಮರಳಿದ್ದಾನೆ. ಮನುಷ್ಯರಹಿತ ಆಕಾಶನೌಕೆಗಳು ನೆರೆಗ್ರಹಗಳಾದ ಶುಕ್ರ ಹಾಗೂ ಮಂಗಳಗಳ ಮೇಲೆ ಇಳಿದಿವೆ. ಸೌರವ್ಯೂಹದ ಮಹಾಯಾನದಲ್ಲಿ ನಿರತವಾಗಿವೆ. ಅತಿದೂರ, ಅತಿವೇಗ, ಅತಿ ವಿಸ್ತಾರ-ಈ ಅತಿಗಳೊಡನೆ ವ್ಯವಹರಿಸಬೇಕಾದ ಆಕಾಶಯಾನದಲ್ಲಿ ನೌಕಾಯನದ ಮಹತ್ತ್ವ ಕೂಡ ಅತಿ ಆಗುತ್ತದೆ. ಇದರಲ್ಲಿ ಅತಿನಿಷ್ಕøಷ್ಟತೆ ಸಾಧಿಸಿದ ವಿನಾ ಆಕಾಶಯಾನ ಸಫಲವಾಗದು.

	1976ರಲ್ಲಿ ವೈಕಿಂಗ್ ಆಕಾಶನೌಕೆಗಳನ್ನು ಮಂಗಳಾಭಿಮುಖವಾಗಿ ಉಡಾಯಿಸಿದ್ದೂ ಅವುಗಳಲ್ಲಿದ್ದ ಕೋಶಗಳು ಮಂಗಳ ತಳದ ಮೇಲೆ ಮೃದುವಾಗಿ ಇಳಿದು ಕಾರ್ಯನಿರ್ವಹಿಸಿದ್ದೂ ಸರಿಯಷ್ಟೆ.. ಸುಮಾರು ಹತ್ತು ತಿಂಗಳ ಯಾನಾವಧಿಯಲ್ಲಿ ನೌಕೆ ಚಲಿಸಿದ ದೂರ 70 ಕೋಟಿ ಕಿಲೊಮೀಟರುಗಳು. ವೈಕಿಂಗಿನ ಉಡಾವಣ ನೆಲೆಯಾದ ಭೂಮಿಗೆ ಅತಿ ರಭಸದ ಆವರ್ತನ ಹಾಗೂ ಪರಿಭ್ರಮಣ ಚಲನೆಗಳಿವೆ. ಸಹಜವಾಗಿ ಇವೆರಡೂ ವೈಕಿಂಗಿನ ಉಡಾವಣ ವೇಗ ಹಾಗೂ ಚಲನದಿಶೆಗಳ ಮೇಲೆ ಪ್ರಭಾವ ಬೀರುವುವು. ಇತ್ತ ಮಂಗಳಕ್ಕೆ ಕೂಡ ಇದೇ ವಿಧವಾದ ಆದರೆ ಭಿನ್ನ ದರಗಳ ಚಲನೆಗಳಿವೆ. ಅದರ ಕಕ್ಷೆ ಭೂಕಕ್ಷೆಗಿಂತ ತೀರ ಬೇರೆ ಆದದ್ದು. ಇಂಥ ಹಲ ಬಗೆಯ ವಿಭಿನ್ನತೆಗಳು ಇದ್ದಾಗ್ಯೂ ಅತಿ ಪುಟ್ಟ ವೈಕಿಂಗ್ ನೌಕೆ ಸರಿಯಾಗಿ ಗುರಿ ತಲಪಿದ್ದು ನೌಕಾಯನದಲ್ಲಿ ಸಾಧಿಸಲಾಗಿರುವ ನಿಷ್ಕøಷ್ಟತೆಗೆ ಸಾಕ್ಷಿ. ಬುಧ, ಶುಕ್ರ ಹಾಗೂ ಮಂಗಳಗಳನ್ನು ಕುರಿತಂತೆ ಕೇವಲ ಕೆಲವು ಹತ್ತು ಕಿಲೊಮೀಟರುಗಳ ಲಕ್ಷ್ಯಭ್ರಷ್ಟತೆಯ ಒಳಗೆ ಗುರಿ ತಲಪುವುದು ಇಂದು ಸಾಧ್ಯವಾಗಿದೆ. ದೂರ ಗ್ರಹಗಳಾದ ಗುರು ಹಾಗೂ ಶನಿಗಳನ್ನು ಕುರಿತಂತೆ ಈ ಭ್ರಷ್ಟತೆ ಕೆಲವು ನೂರು ಕಿಲೊಮೀಟರುಗಳಿಗಿಂತ ಜಾಸ್ತಿ ಆಗದು. ಕೇವಲ ನೂರಿನ್ನೂರು ಮೀಟರ್ ದೂರದಲ್ಲಿರುವ ಸ್ಥಿರ ಗುರಿದಿಬ್ಬದಿಂದ ತುಪಾಕಿ ಹೊಟ್ಟಿಸುವಾಗಲೇ ಗೋಲಿ ಸಾಕಷ್ಟು ವಿಚಲನೆಗೊಂಡಿರುವುದೆಂಬ ಅಂಶ ಈ ಕ್ಷೇತ್ರದಲ್ಲಿ ಕೈಯಾಡಿಸಿರುವವರಿಗೆ ಅನುಭವವೇದ್ಯ. ಹಾಗಿರುವಾಗ ಕೋಟ್ಯಂತರ ಕಿಲೊಮೀಟರ್ ದೂರಗಳಲ್ಲಿ ಹರಡಿ ಹೋಗಿರುವ ಚರಗುದಿಬ್ಬ ಹಾಗೂ ಚರಲಕ್ಷ್ಯಗಳ ನಡುವೆ ಸಾಧಿಸಲಾಗಿರುವ ಈ ಗುರಿವಿಕ್ರಮ ಸಾಮಾನ್ಯವಾದದ್ದೇನೂ ಅಲ್ಲ.

	ಇದರ ಪ್ರಮುಖ ಕಾರಣವನ್ನು ತಂತ್ರವಿದ್ಯೆಯ ಹಲವಾರು ಪ್ರಕಾರಗಳಲ್ಲಿ ಸಾಧಿಸಲಾಗಿರುವ ಪ್ರಗತಿಯಲ್ಲಿ ಕಾಣಬಹುದು. ಕಳೆದ ಹದಿನೈದು ಇಪ್ಪತ್ತು ವರ್ಷಗಳ ಅವಧಿಯಲ್ಲಿ ರೇಡಾರ್ ಮಾಪನ, ಗಡಿಯಾರ ಕಾಲ, ಆಕಾಶ ನೌಕೆಗಳ ಪಥವೀಕ್ಷಣ ಕ್ರಮ, ಅಭಿಗ್ರಾಹಕಗಳ ಹಾಗೂ ಪ್ರೇಷಕಗಳ ಸಂವೇದನ ಶೀಲತೆ, ರೇಡಿಯೊ ಸಂಜ್ಞೆಗಳನ್ನು ಪ್ರಭಾವಿಸುವ ಬಾಹ್ಯಕಾರಕಗಳ ಅಳತೆ ಮತ್ತು ಗಣಕ ಕ್ರಮವಿಧಿ ಇವುಗಳಲ್ಲಿ ಊಹಾತೀತ ಪ್ರಗತಿ ಆಗಿರುವುದರಿಂದ ನೌಕಾಯನದಲ್ಲಿ ಯಶಸ್ಸು ಸಾಧ್ಯವಾಗಿದೆ..

	ಕಡಲಿನಲ್ಲಿ ನೌಕೆಗೆ ಮಾರ್ಗದರ್ಶನ ಮಾಡುವುದು ನೌಕಾಯನದ ಪ್ರಮುಖ ಪಾತ್ರ. ಆಕಾಶಯಾನಕ್ಕೂ ಇದು ಸೊಗಸಾಗಿ ಅನ್ವಯವಾಗುವುದು : ಮೇರೆ ಇರದ ಬಾನ ಕಡಲಿನಲ್ಲಿ ಆಕಾಶನೌಕೆಯ ಮಾರ್ಗದರ್ಶನ ಆಕಾಶನೌಕಾಯನದ ಪ್ರಮುಖ ಪಾತ್ರ. ಇಲ್ಲಿ ಬೇಕಾಗುವುದು ಭೂಪಟ, ಅಲ್ಲಿ ಬೇಕಾಗುವುದು ಸೌರವ್ಯೂಹ ಪಟ. ಇಲ್ಲಿ ಭೂಮಿಯನ್ನು ಕುರಿತಂತೆ-ನೆಲ, ಜಲ, ವಾಯುವಿನಲ್ಲಿ-ಪಥ ನಿರ್ಧಾರ ಮಾಡಿ ಗುರಿ ತಲಪುವುದು, ಪಥದಲ್ಲಿ ವಿಚಲನೆ ಅದಾಗ ಅದನ್ನು ಸರಿಪಡಿಸುವುದು ಉದ್ದೇಶವಾದರೆ ಅಲ್ಲಿ ಸೌರವ್ಯೂಹವನ್ನು ಕುರಿತಂತೆ-ವಿವಿಧ ಗ್ರಹೋಪಗ್ರಹಗಳ ನಡುವೆ-ಅದೇ ಕಾರ್ಯವನ್ನು ನಿರ್ವಹಿಸುವುದು ಉದ್ದೇಶ.

	ಸುಮಾರು 1960ರ ತನಕವೂ ಗ್ರಹಪಂಚಾಂಗಗಳಲ್ಲಿ ದೊರೆಯುತ್ತಿದ್ದ ಮಾಹಿತಿಗಳ ನಿಷ್ಕøಷ್ಟತೆ, ಹಿನ್ನೆಲೆಯ ನಕ್ಷತ್ರಗಳನ್ನು ಕುರಿತಂತೆ ಗ್ರಹೋಪಗ್ರಹಗಳ (ಮತ್ತು ಕೆಲವೊಮ್ಮೆ ಕ್ಷುದ್ರಗ್ರಹಗಳ) ಸ್ಥಾನಗಳನ್ನು ನಿರ್ಧರಿಸಲು ಬಳಸುತ್ತಿದ್ದ ಖಗೋಳ ವೈಜ್ಞಾನಿಕ ತಂತ್ರಗಳಿಗೆ ಸೀಮಿತವಾಗಿತ್ತು. ಈ ಅಳತೆ ಮತ್ತು ಗುರುತ್ವ ಸಿದ್ಧಾಂತ ಇವುಗಳ ನೆರವಿನಿಂದ ಗ್ರಹಗಳ ಕಕ್ಷಾಸ್ಥಾನಗಳನ್ನು ಸೂಚಿಸುತ್ತಿದ್ದರು. ಅಂತರಗ್ರಹ ದೂರಗಳನ್ನು ಅಳೆಯಲು ಖಗೋಳಮಾನವನ್ನೇ ಬಳಸುವುದು ರೂಢಿ. ಸೂರ್ಯ-ಭೂಮಿ ಸರಾಸರಿ ಅಂತರವೇ ಖಗೋಳಮಾನ. ಈ ತೆರನಾಗಿ ದೊರೆತ ಅಂಕೆ ಅಂಶಗಳು ಹತ್ತು ಲಕ್ಷ ಭಾಗಗಳಲ್ಲಿ ಬೆರಳೆಣಿಕೆಯ ಭಾಗಗಳ ತನಕ ನಿಷ್ಕøಷ್ಟವಾಗಿರುತ್ತಿದ್ದುವು. ನಮ್ಮ ನೆರೆಗ್ರಹಗಳನ್ನು ಕುರಿತಂತೆ ಇದು ಕೆಲವು ನೂರು ಕಿಲೊಮೀಟರುಗಳಿಗೆ ಸಮಾನ. ಉದಾಹರಣೆಗೆ 1960ರ ತನಕ ಖಗೋಳಮಾನಕ್ಕೆ ನಿಗದಿಸಿದ್ದ ಬೆಲೆಯಲ್ಲಿ 66,000 ಕಿಲೋ ಮೀಟರುಗಳಷ್ಟು ದೋಷ ಇತ್ತು. (ಇದು 2,000 ಭಾಗಗಳಲ್ಲಿ 1 ಭಾಗದಷ್ಟು ದೋಷಕ್ಕೆ ಸಮಾನ) ಅಂತರಗ್ರಹಯಾವನ್ನು ಯೋಚಿಸಿ ನಿರ್ವಹಿಸುವಾಗ ಖಗೋಳಮಾನ ಕೀಲಿ ಅಳತೆ. ಇದು ಎಷ್ಟೆಷ್ಟು ಅಧಿಕ ನಿಷ್ಕøಷ್ಟವಾಗಿರುವುದೋ ಗುರಿ ಹೊಡೆತ ಅಷ್ಟಷ್ಟು ಹೆಚ್ಚು ಕರಾರುವಾಕ್ಕಾಗಿರುವುದು. ಉದಾಹರಣೆಗೆ 1960ರ ಖಗೋಳಮಾನ ಮೌಲ್ಯಾನುಸಾರ ಮ್ಯಾರಿನರ್-2ನ್ನು (ಗುರಿ ಶುಕ್ರ, 1962) ಉಡಾಯಿಸಿದ್ದರೆ ಅದು ಗುರಿ ತಪ್ಪಿ ಶುಕ್ರ ಗ್ರಹದ ತಪ್ಪು ಮಗ್ಗುಲಲ್ಲಿ ಇಳಿದು ಉದ್ದೇಶ ವಿಫಲವಾಗಿರುತ್ತಿತ್ತು. ಅದೃಷ್ಟವಶಾತ್ ಖಗೋಳಮಾನದಲ್ಲಿದ್ದ ದೋಷವನ್ನು 1961ರಲ್ಲಿಯೇ ನಿವಾರಿಸಲಾಗಿತ್ತು. ಬೃಹತ್ತಾದ ರೇಡಿಯೊ ದೂರದರ್ಶಕಗಳು ಉಚ್ಚ ಸಾಮಥ್ರ್ಯ ಪ್ರೇಷಕಗಳು ಅತಿ ಸಂವೇದನಶೀಲ ಅಭಿಗ್ರಾಹಕಗಳು ಮತ್ತು ನಾಜೂಕಾದ ಸಂಜ್ಞಾಸಂಸೂಚಕ ತಂತ್ರಗಳು ಇವನ್ನು ಬಳಸಿ ಶುಕ್ರಕ್ಕೆ ಕಳಿಸಿದ ರೇಡಾರ್ ಸ್ಪಂದಗಳ ಪ್ರತಿಸ್ಪಂದಗಳನ್ನು ಪಡೆಯುವುದು ಸಾಧ್ಯವಾಯಿತು. ಖಗೋಳಮಾನದ ಕರಾರುವಾಕ್ಕಾದ ಮೌಲ್ಯ 14,95,97,871 ಕಿಲೊಮೀಟರುಗಳೆಂದು (9,29,55,806 ಮೈಲುಗಳು) ಈಗ ತಿಳಿದಿದೆ. (ಇದರಲ್ಲಿ ಇರಬಹುದಾದ ಅನಿಶ್ಚಿತತ್ವದ ಬೆಲೆ ಸುಮಾರು 1 ಕಿಮೀ ಮಾತ್ರ)

	ನೌಕಾಯನದಲ್ಲಿ ದೂರಮಾಪನೆಯಷ್ಟೇ ಮುಖ್ಯವಾದದ್ದು ಕಾಲಮಾಪನೆ. ಗತ ಎರಡು ಶತಮಾನಗಳಲ್ಲಿ ಸಾಕಷ್ಟು ಸುಧಾರಣೆ ಈ ದಿಶೆಯಲ್ಲಿ ಆಗಿದ್ದರೂ ಇದೇ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಅಭೂತಪೂರ್ವ ಪ್ರಗತಿ ಸಿದ್ಧಿಸಿದೆ. ಉದಾಹರಣೆಗೆ 18ನೆಯ ಶತಮಾನದ ಉತ್ಕøಷ್ಟ ಕಾಲ ಮಾಪಕವೊಂದು (ಕ್ರೊನೊಮೀಟರ್) ಒಂದೆರಡು ವಾರಗಳ ಅವಧಿ ತನಕ 1 ಸೆಕೆಂಡಿಗಿಂತ ಹೆಚ್ಚು ಕಾಲವನ್ನು ಗಳಿಸದೆ ಯಾ ಕಳೆದುಕೊಳ್ಳದೆ ನಡೆಯಬಲ್ಲದಾಗಿತ್ತು. ಆದರೆ ಆಕಾಶಯಾನದ ದೀರ್ಘಕಾಲ ಮತ್ತು ಅತಿವೇಗವನ್ನು ಗಮನಿಸುವಾಗ ಇದು ಮಹಾದೋಷವೇ ಆಗಿ ಪರಿಣಮಿಸುವುದು. 1945ರ ವೇಳೆಗೆ ಬೆಣಚು ಹರಳು ಗಡಿಯಾರಗಳು ಬಳಕೆಗೆ ಬಂದುವು. ಇವು ಹಲವಾರು ವರ್ಷಗಳ ತನಕ ಒಂದು ಸೆಕೆಂಡ್ ನಿಷ್ಕøಷ್ಟತೆಯನ್ನು ಕಾಪಾಡಿಕೊಳ್ಳಬಲ್ಲವಾಗಿದ್ದುವು. ಇಂದಿನ ಹೈಡ್ರೊಜನ್ ಮೇಸರುಗಳಿಗೆ 24 ಗಂಟೆಗಳ ಅವಧಿಯಲ್ಲಿ 1015 ಭಾಗಗಳಿಗಿಂತಲೂ ಅಧಿಕ ನಿಷ್ಕøಷ್ಟತೆ ಇದೆ. ಇಂಥ ಒಂದು ಮೇಸರಿನಲ್ಲಿಯ ಅತ್ಯಲ್ಪ ದೋಷವಾದರೂ ಸ್ಥಿರವಾದದ್ದಾದರೆ ಒಂದು ಸೆಕೆಂಡಿನಷ್ಟು ಲಾಭ ಯಾ ನಷ್ಟ ಸಂಚಯಿಸಲು ಒಂದು ಕೋಟಿ ವರ್ಷಗಳೇ ಬೇಕು.

	ಆಕಾಶಯಾನದಲ್ಲಿ ಭೂಮಿಗೂ ನೌಕೆಗೂ ನಡುವೆ ರೇಡಿಯೊ ಅಲೆಗಳ ಮೂಲಕ ಸೇತುವೆ ಏರ್ಪಡುವುದು. ಇವು ಬೆಳಕಿನ ವೇಗದಿಂದ (ಸೆಕೆಂಡಿಗೆ 3 ಲಕ್ಷ ಕಿಮೀ) ಧಾವಿಸುವುವು. ಧರೆಯಲ್ಲಿಯ ಪ್ರೇಷಕ ಹಾಗೂ ಅಭಿಗ್ರಾಹಕಗಳು ಅತಿ ಸಾಮಥ್ರ್ಯಯುತವಾದವೂ ವಿಶಾಲಾವಾದವೂ ಆಗಿರಬೇಕು. ಇಲ್ಲವಾದರೆ ಆಕಾಶದ ಅತಿ ದೂರದಲ್ಲಿ ರೇಡಿಯೊ ಸಂಜ್ಞೆಗಳು ನೌಕೆಯನ್ನು ತಲಪಲಾರವು ಮತ್ತು ನೌಕೆಯಿಂದ ಪ್ರೇಷಿತವಾದ ದುರ್ಬಲ ಸಂಜ್ಞೆಗಳು ಧರೆಗೆ ಯೋಗ್ಯ ಮಾಹಿತಿ ಒದಗಿಸಲಾರವು. ಉದಾಹರಣೆಗೆ ಮಂಗಳದಲ್ಲಿ ಬೆಂಕಿಕಡ್ಡಿಗೀರಿ ಬೆಂಕಿ ಉರಿದಾಗ ಹೊಮ್ಮುವ ಶಕ್ತಿಯನ್ನು ಧರೆಯಲ್ಲಿಯ ಅಭಿಗ್ರಾಹಕಗಳು ಗ್ರಹಿಸಬಲ್ಲವು. ಭೂಮಿಯ ಮೇಲಿನ ಯಾವುದೇ ಒಂದು ವೀಕ್ಷಣ ಕೇಂದ್ರ ಸದಾ ನೌಕೆಯನ್ನು ದೃಷ್ಟಿಸುತ್ತಿರಲಾರದು. ಭೂಮಿಯ ಆವರ್ತನೆ ಹಾಗೂ ನೌಕೆಯ ಚಲನೆಗಳ ಪರಿಣಾಮವಾಗಿ ನೌಕೆಯನ್ನು ಕುರಿತಂತೆ ವೀಕ್ಷಣಕೇಂದ್ರದ ಸ್ಥಾನ ನಿರಂತರವಾಗಿ ಬದಲಾಗುತ್ತಿರುವುದೇ ಇದರ ಕಾರಣ. ಇದಕ್ಕಾಗಿ ಭೂಮಿಯ ಮೇಲೆ ಅನುಕೂಲ ನೆಲೆಗಳಲ್ಲಿ ಹರಡಿ ಹೋದಂತೆ ಹಲವಾರು ಪಥವೀಕ್ಷಣ ಠಾಣ್ಯಗಳನ್ನು ಕಟ್ಟಲಾಗಿದೆ. ಇವುಗಳಲ್ಲಿ ಸಂಗೃಹೀತವಾದ ಮಾಹಿತಿ ಕೇಂದ್ರ ನಿರ್ದೇಶನಾಲಯಕ್ಕೆ ಆಗಿಂದಾಗಲೇ ರವಾನಿಸಲ್ಪಡುವುದು.

	ಚಲನೆಯ ಗುರುತ್ವ ನಿಯಮಗಳ ರೀತ್ಯ ಗ್ರಹೋಪಗ್ರಹಗಳು ಹೇಗೊ ಹಾಗೆ ಆಕಾಶನೌಕೆಗಳು (ಕೃತಕ ಉಪಗ್ರಹಗಳು) ಕೂಡ ಚಲಿಸುವುವು. ಆಕಾಶದಲ್ಲಿ ಸಾಗುತ್ತಿರುವ ನೌಕೆಯ ಸ್ಥಾನ ಮತ್ತು ವೇಗ ಯಾವುದೇ ನಿರ್ದಿಷ್ಟ ಮುಹೂರ್ತದಲ್ಲಿ ತಿಳಿದಿದ್ದರೆ (ಆರು ಸಂಖ್ಯೆಗಳ ಒಂದು ಗಣ ಇವನ್ನು ನಿರ್ಧರಿಸುವುದು) ಅದು ಸಾಗುವ ಏಕೈಕ ಪಥವನ್ನು ಚಿತ್ರಿಸಬಹುದು. ಹೀಗೆ ನಿರ್ಧರಿತವಾದ ಪಥ, ಗಣನೆಯಿಂದ ನಿರ್ಧರಿತವಾದ ಪಥದೊಂದಿಗೆ ಐಕ್ಯವಾಗದಿದ್ದರೆ ನೌಕೆಯನ್ನು ಸರಿಯಾದ ಪಥಕ್ಕೆ ತರಲು ಸಂಯುಕ್ತ ತಿದ್ದುಪಡಿಯನ್ನು ಮಾಡಬೇಕಾಗುವುದು. ಉದಾಹರಣೆಗೆ ವೈಕಿಂಗ್-1ನ್ನು ಮಂಗಳದತ್ತ ಉಡಾಯಿಸಿದಾಗ ಉಡಾವಣೆಯ ಮಹಾಸ್ಫೋಟನೆಯ ಪರಿಣಾಮವಾಗಿ ಒಂದಿಷ್ಟು ದೋಷ ಅದರ ಪಥಕ್ಕೆ ನುಸುಳಿತ್ತು. ಇದರೊಂದಿಗೆ ಬೇಕೆಂದೇ ಒಂದಿಷ್ಟು ದೋಷವನ್ನು ಸೇರಿಸಲಾಗಿತ್ತು ಕೂಡ. ಏಕೆಂದರೆ ಸರಿಯಾದ ಪಥದಲ್ಲೇ ನೌಕೆ ಹೋದುದಾದರೆ ಅದರ ಉಡಾವಣ ವಾಹನ (ಸೆಂಟಾರ್ ಘಟ್ಟ) ಕೂಡ ಅದರೊಡನೆ ಸಾಗಿ ಮಂಗಳದ ಮೇಲೆ ಬಿದ್ದು ಆ ಗ್ರಹವನ್ನು ಜೈವಿಕವಾಗಿ ಕಲುಷಗೊಳಿಸುವ ಸಾಧ್ಯತೆ ಇತ್ತು. ನೌಕೆಗೆ ಅದರ ಮಧ್ಯ ಪಥದಲ್ಲಿ ಸಂಯುಕ್ತ ತಿದ್ದುಪಡಿ ನೀಡಿದಾಗ ಅದು ಮಾತ್ರ ಮಂಗಳಾಭಿಮುಖವಾಗಿ ತೆರಳಿತು. ಉಡಾವಣವಾಹನ ದಿಕ್ಕು ತಪ್ಪಿ ಆಕಾಶದಲ್ಲಿ ಬೇರೆಲ್ಲಿಗೋ ಹೋಗಿ ನಾಶವಾಯಿತು.

	ನೌಕೆ ಉದ್ದಿಷ್ಟ ಗ್ರಹದ ಗುರುತ್ವ ವಲಯವನ್ನು ಪ್ರವೇಶಿಸುವಾಗ ನೌಕೆಯ ಚಲನೆಯಲ್ಲಿ ವೇಗೋತ್ಕರ್ಷ ಸಹಜವಾಗಿ ತೋರಿಬರುವುದು. ಗ್ರಹವನ್ನು ನೌಕೆ ಪರಿಭ್ರಮಿಸುತ್ತಿರುವಾಗ ಅದರ ಕಕ್ಷೆಯಲ್ಲಿ ವಿಚಲನೆಗಳು ತಲೆದೋರುತ್ತವೆ. ಗ್ರಹದ ರಾಶಿವಿತರಣೆ ಏಕರೂಪವಾಗಿಲ್ಲದಿರುವುದೇ ಇದರ ಕಾರಣ. ಇನ್ನು ದೂರಗ್ರಹಗಳಾದ ಗುರು ಹಾಗೂ ಶನಿ ವಲಯವನ್ನು ಸಮೀಪಿಸುವಾಗ ಆಯಾ ಗ್ರಹದ ಉಪಗ್ರಹಗಳ ಒಂಟಿ ಯಾ ಸಂಯುಕ್ತ ಪ್ರಭಾವವೂ ಸಾಕಷ್ಟು ಇರುವುದು. ಹೀಗಾಗಿ ಅವುಗಳ ಸನಿಹದಲ್ಲಿ ನಿಷ್ಕøಷ್ಟ ನೌಕಾಯನ ಪರಮ ಸಾಹಸವೇ ಆಗುವುದು. ಆ ಗ್ರಹಗಳನ್ನು ಕುರಿತ ಹೆಚ್ಚಿನ ಅಂಕೆ ಅಂಶಗಳು ಮುಂದಿನ ದಶಕಗಳಲ್ಲಿ ಲಭಿಸಿದಂತೆ ಆ ವಲಯದಲ್ಲಿಯ ನೌಕಾಯನವೂ ಸುಗಮವಾಗುವುದರಲ್ಲಿ ಸಂದೇಹವಿಲ್ಲ.

	ವಾಸ್ತವವಾಗಿ ಅಂತರಗ್ರಹ ನೌಕಾಯನ ಒಂದು ವಿಚಿತ್ರ ಸಮಸ್ಯೆ. ಇದರ ಒಂದು ಮುಖವನ್ನು ಗಮನಿಸುವಾಗ ನಿಸರ್ಗ ಮಹಾ ಹಠಮಾರಿ, ಗುಟ್ಟು ಬಿಡದ ಜಿಪುಣಾಗ್ರೇಸರ, ಹೆಜ್ಜೆ ಹೆಜ್ಜೆಗೆ ತೊಂದರೆ ಕೊಡುವೆ ಪೀಡೆ ಎನ್ನಿಸುತ್ತದೆ. ನಮ್ಮ ಪ್ರಯೋಗದಲ್ಲಿ ಇನಿತು ಲೋಪ ಕಂಡು ಬಂದರೂ ಅಂತಿಮ ಫಲಿತಾಂಶ ತೀರ ನಿರಾಶೆಯದೇ ಆದೀತು. ಹೆಜ್ಜೆ ಹೆಜ್ಜೆಗೆ ನಿಷ್ಕøಷ್ಟತೆಯಲ್ಲಿ ಗರಿಷ್ಠ ಸಿದ್ಧಿಯನ್ನೇ ನಿಸರ್ಗ ಬೇಡುತ್ತದೆ. ಅದೇ ನಿಸರ್ಗದ ಇನ್ನೊಂದು ಮುಖವನ್ನು ಗಮನಿಸುವಾಗ ನಮ್ಮ ಅಲ್ಪ ಪ್ರಯತ್ನಕ್ಕೆ ಅದರಿಂದ ದೊರೆಯುವ ವಿಪುಲ ಸಂಪದ್ಭರಿತ ಕೊಡುಗೆಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸುವುವು. ಗ್ರಹೋಪಗ್ರಹಗಳ ರಾಶಿ, ಚಲನೆ ಅಂತರ, ಭೌತಗುಣಗಳು ಮುಂತಾದವುಗಳ ಬಗ್ಗೆ ಅಭೂತಪೂರ್ವ ನಿಷ್ಕøಷ್ಟ ಫಲಿತಾಂಶಗಳು ಕೇವಲ ನೌಕೆಗಳ ಪಥವೀಕ್ಷಣೆಯಿಂದ (ಪಥಗಳಲ್ಲಿ ಸಂಭವಿಸುವ ವಿಚಲನೆಗಳ ಅಧ್ಯಯನದಿಂದ) ತಿಳಿದು ಬಂದಿವೆ. ಮುಂಬರುವ ದಶಕಗಳಲ್ಲಿ ಆಕಾಶ ನೌಕಾಯನದಲ್ಲಿ ಹೆಚ್ಚಿನ ಸುಧಾರಣೆಗಳು ಸಾಧ್ಯವಾಗಿ ದೂರ ಗ್ರಹಗಳತ್ತ ಪ್ರಯಾಣವೂ ಹೆಚ್ಚು ನಿಷ್ಕøಷ್ಟವಾಗುವುದೆಂದು ನಿರೀಕ್ಷಿಸಬಹುದು. 		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ